ಪಯಣಿಗ

ಬಾಳ ಪಯಣದ ಜೊತೆ ದೇಶ ಸುತ್ತುವ ಹುಚ್ಚಾಟದಲ್ಲಿ…

ವಿರುಪಾಪುರ

| 2 Comments

ವಿರುಪಾಪುರ - virupapura

ವಿರುಪಾಪುರ, ನಮ್ಮ ಹಳ್ಳಿಯಿಂದ ಈಶಾನ್ಯಕ್ಕೆ ಸುಮಾರು ಒಂದು ಮೈಲಿ ದೂರದಲ್ಲಿರೋ ಒಂದು ಸಣ್ಣ ಹಳ್ಳಿ. ನಮ್ಮೂರೇ ಚಿಕ್ಕದು ಅಂದರೆ ವಿರುಪಾಪುರ ಮತ್ತೂ ಸಣ್ಣ ಊರು. ಹಳ್ಳಿಯ ಉತ್ತರಕ್ಕೆ, ರಸ್ತೆಯ ಮಗ್ಗುಲಿಗೇ ಒಂದು ಸಣ್ಣ ಗುಡ್ಡ. ದಾಪುಗಾಲು ಹಾಕುತ್ತಾ ಹತ್ತಿದರೆ 15-20 ನಿಮಿಷಗಳಲ್ಲೇ ತುದಿಯಲ್ಲಿರುವ ಮಂಟಪ ತಲುಪುವಷ್ಟು ಸಣ್ಣದು. ಗುಡ್ಡ ಚಿಕ್ಕದಾದರೂ ನನ್ನಲ್ಲಿ ಊರೂರು ಸುತ್ತುವ, ಬೆಟ್ಟ-ಗುಡ್ಡಗಳಲ್ಲಿ ಅಲೆಯುವ ಗೀಳು ಹುಟ್ಟುಸಿದ ಜಾಗ. ಚಿಕ್ಕವನಿದ್ದಾಗ ಬೇರೆಯವರು ಹೇಳಿದ ಸೀಳುನಾಯಿಗಳ ಕಥೆಯನ್ನು ಕಣ್ಣಾರಳಿಸಿ ಕೇಳಿ, ಮೂರ್ನಾಲ್ಕು ವರ್ಷಗಳ ನಂತರ ಅದೇ ಬೆಟ್ಟದಲ್ಲಿ ಕಲ್ಲು-ಬಂಡೆಗಳ ಸಂದಿಯಲ್ಲಿ, ಪೊದೆಗಳ ಹಿಂಬದಿಯಲ್ಲಿ ಹುಡುಕಿದ್ದೂ ಉಂಟು. ಸೀಳುನಾಯಿಗಳ ಜೊತೆಗೆ, ಬೆಟ್ಟದ ಮೇಲೆ ಬೆಳೆದಿದ್ದ ಲೆಕ್ಕವಿಲ್ಲದಷ್ಟು ಸೀತಾಫಲ ಗಿಡಗಳಲ್ಲಿ ಹಣ್ಣುಗಳನ್ನು ಹುಡುಕಿದೆಷ್ಟೋ. ಬೇಸಿಗೆ ರಜೆಗಳಲ್ಲಿ ಬೆಟ್ಟ ಹತ್ತಿಳಿದ, ಒಂಟಿ ಹಾಳು ಮಂಟಪದಲ್ಲಿ ಒಬ್ಬನೇ ಕುಳಿತು ಕಳೆದ ಸಮಯವೆಷ್ಟೋ.

ವಿರುಪಾಪುರ - virupapura

ಶಿವಗಂಗೆ - shivagange

ವಿರುಪಾಪುರ ಗುಡ್ಡದ ದಕ್ಷಿಣದ ಎತ್ತರದಲ್ಲಿ ಒಂಟಿ ಹಾಳು ಮಂಟಪವಿದ್ದರೆ, ಉತ್ತರ ತುದಿಯಲ್ಲಿ ಸ್ವಲ್ಪ ತಗ್ಗಿನಲ್ಲಿ ರಾಮ ಕಟ್ಟಿಸಿದನೆಂದು ಹೇಳುವ ಶಿವನ (ಸಿದ್ದರಾಮೇಶ್ವರ) ಗುಡಿಯಿದೆ. ರಾಮಾಯಣ ಕಾಲದಲ್ಲಿ, ರಾಮ-ಲಕ್ಷ್ಮಣ-ಹನುಮಂತರು ಸೀತೆಯನ್ನು ಹುಡುಕುತ್ತಾ ಬಂದಾಗ ಈ ಗುಡಿಯನ್ನು ಕಟ್ಟಲಾಯಿತೆಂದು ಪ್ರತೀತಿ. ಸೀತೆಯನ್ನು ಹುಡುಕುತ್ತ ಹನುಮಂತ ಒಂದೇ ನೆಗೆತಕ್ಕೆ ಈ ಗುಡ್ಡದಿಂದ ಶಿವಗಂಗೆ ಗುಡ್ಡಕ್ಕೆ ಹಾರಿದನೆಂದು ಕೂಡ ಕೇಳಿದ್ದೇನೆ. ಗುಡಿಯಿಂದಾಗಿ ಊರಿಗೆ ’ವಿರೂಪಾಕ್ಷಪುರ’ ಎಂದು ಹೆಸರು ಬಂತೆಂದೂ, ನಂತರ ಜನರ ಬಾಯಲ್ಲಿ ’ವಿರುಪಾಪುರ’ ಆಯಿತೆಂದು ಒಂದು ಕಥೆ.

ಈಗಲೂ ಹಳ್ಳಿಗೆ ಹೋದಾಗ ವಿರುಪಾಪುರದ ಗುಡ್ಡ, ಒಂಟಿ ಮಂಟಪದ ಕಡೆ ಮನಸ್ಸೋಡುತ್ತದೆ. ಈಗಂತೂ ಕಲ್ಲು-ಗಣಿಗಾರಿಕೆಯಿಂದಾಗಿ ಗುಡ್ಡದ ಕಾಲು ಭಾಗ ಆಗಲೇ ಮರೆಯಾಗಿದೆ. ನನ್ನ ಸುತ್ತಾಟಗಳಿಗೆ ಇಂಬು ಕೊಟ್ಟ ವಿರುಪಾಪುರದ ಗುಡ್ಡ, ಹಾಳು ಮಂಟಪ – ಕಣ್ಮುಂದೆಯೇ ಇಲ್ಲದಂತಾಗುವಾಗ, ಸ್ವಂತದ್ದೇನೋ ಕಳೆದುಕೊಳ್ಳುತಿದ್ದೇನೆಯೋ ಅನ್ನಿಸುತ್ತಿದೆ. ಕಲ್ಲು ಕರಗುವ ಮುನ್ನ, ನೋಡಬೇಕೆಂದಿದ್ದರೆ ಹೇಳಿ – ಗುಡ್ಡ ಹತ್ತಿಸಿ, ಸೀಳು ನಾಯಿಯ ಗುಹೆ ತೋರಿಸಿ ಬರುತ್ತೇನೆ :)

2 Comments

  1. ಅಚ್ಹ ಕನ್ನಡದ ಊರಿನ ಬಗ್ಗೆ ಅಚ್ಚ ಕನ್ನಡದಲ್ಲಿ ಹೇಳುವ ಪ್ರಯತ್ನ ಬಹಳ ಚೆನ್ನಾಗಿದೆ. ವಿರುಪಾಪುರದ ಗುಡ್ಡದ ಮುಂದೆಯೆ ಹಾದು ಹೋದರೂ ಆ ದಿನ ಅದನ್ನು ಹತ್ತಲು ನೀನು ಬಿಡಲಿಲ್ಲ… ಮತ್ತೊಮ್ಮೆ ಹೋದಾಗ ಸೀಳುನಾಯಿ ಗುಹೆಯನ್ನ ತೋರಿಸುವುದನ್ನು ಮರೆಯಬೇಡ.

    ನಿನ್ನ ಈ ಪ್ರಯತ್ನ ಯಶಸ್ವಿಯಗಲೆಂದು ಹಾರೈಸುತ್ತಾ – ಶ್ರಿಕ್ (ಸಹ ಪಯಣಿಗ!!)

Leave a Reply