ನದಿಗಳು, ಅದರಲ್ಲೂ ಕರ್ನಾಟಕದ ನದಿಗಳು ಅಂದಾಕ್ಷಣ ನನಗೆ ಮೊದಲು ನೆನಪಿಗೆ ಬರುವುದು ಶಿಂಷಾ. ಬಹುಶಃ ನಾನು ನೋಡಿದ, ಲೆಕ್ಕವಿಲ್ಲದಷ್ಟು ಬಾರಿ ನೀರಿನಲ್ಲಿ ಆಡಿದ ಮತ್ತು ಮಿಂದ ಮೊದಲ ನದಿಯಾದದ್ದರಿಂದ ಇರಬಹುದು. ಅಥವಾ ಶಾಲೆಯಲ್ಲಿದ್ದಾಗ ಪ್ರತಿ ರಸಪ್ರಶ್ನೆಯಲ್ಲೂ ಕೇಳುತ್ತಿದ್ದ – “ತುಮಕೂರು ಜಿಲ್ಲೆಯಲ್ಲಿ ಹುಟ್ಟುವ ಮೂರು ನದಿಗಳು ಯಾವುವು?” – ಎಂಬ ಪ್ರಶ್ನೆಯಿಂದ ಇದ್ದಿರಬಹುದು. ಕಾವೇರಿಯ ಉಪನದಿಯಾದ ಶಿಂಷಾ, ದೇವರಾಯನದುರ್ಗದ ಬಳಿ ಹುಟ್ಟಿ, ತುರುವೇಕೆರೆ ತಾಲ್ಲೂಕಿಗೆ ನುಗ್ಗಿ ಅಲ್ಲಿಂದ ಕುಣಿಗಲ್ ತಾಲ್ಲೂಕಿನೊಳಗೆ ಹರಿಯುತ್ತದೆ. ಅಲ್ಲಿಯತನಕ ಅಡೆತಡೆಯಿಲ್ಲದೆ ಹರಿಯುವ ನದಿಗೆ ಒಂದು ಕಟ್ಟೆ – ಮಾರ್ಕೋನಹಳ್ಳಿ ಜಲಾಶಯ. ಸೈಫನ್ ಮಾದರಿಯ ವಿಶಿಷ್ಟವಾದ ತಂತ್ರಜ್ಞಾನವಿರುವ ಈ ಜಲಾಶಯ ವಿಶ್ವೇಶ್ವರಯ್ಯರವರ ಹಸ್ತಕೌಶಲ. ಯಡಿಯೂರಿನಿಂದ ಸುಮಾರು ನಾಲ್ಕು ಕಿ.ಮೀ. ದೂರವಿರುವ ಜಲಾಶಯ, ಸುತ್ತಮುತ್ತಲಿನ ರೈತಾಪಿ ಜನರಿಗೆ ಜೀವಜಲ.
ಶಿಂಷಾ ಎಂದೊಡನೆ, ಚಿಕ್ಕವನಾಗಿದ್ದಾಗಿನ ದಿನಗಳು ನೆನಪಿಗೆ ಬರುತ್ತದೆ. ಹುಲಿಯೂರುದುರ್ಗದಲ್ಲಿ ಕಳೆದ ಬಾಲ್ಯದ ದಿನಗಳು – ಹತ್ತಿರದ ಕುಂಭಿ ಬೆಟ್ಟವನ್ನು ಲೆಕ್ಕವಿಲ್ಲದಷ್ಟು ಬಾರಿ ಹತ್ತಿದ್ದು, ದೀಪಾಂಬುಧಿ ಕೆರೆ ಏರಿಯ ಮೇಲಿನ ಕೈತುತ್ತೂಟ, ರಜಾ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ ಮಂಡಿಗುಡ್ಡೆಗೆ ವಾಕಿಂಗ್, ಪಕ್ಕದ ಊರಿನ ಹಳೆಯೂರಮ್ಮನ ಜಾತ್ರೆ, ಮನೆಯ ಮುಂದಿನ ಬಾಲ್ ಫೀಲ್ಡ್ ನಲ್ಲಿ ಕ್ರಿಕೆಟ್ಟಾಟ, ಜೊತೆಗೆ ಮಾರ್ಕೋನಹಳ್ಳಿ ಅಣೆಕಟ್ಟಿಗೆ ಒಂದು ದಿನದ ಪಿಕ್ನಿಕ್, ಅಲ್ಲಿನ ಉದ್ಯಾನ ಮತ್ತು ಕಾಲುವೆಯಲ್ಲಿ ಮನದಣಿಯೆ ಆಟ. ಇವೆಲ್ಲ ಸುಮಾರು 15-20 ವರ್ಷಗಳ ಹಿಂದಿನ ಕಥೆ.
ಬಹಳ ವರ್ಷಗಳ ನಂತರ ಇದ್ದಕ್ಕಿಂದಂತೆ ಮಾರ್ಕೋನಹಳ್ಳಿ ನೆನಪಿಗೆ ಬಂದು, ಸಮಯ ಸಿಕ್ಕಾಗ ಆ ಕಡೆ ಹೊರಟೆ. ಅದೇ ನೀರವತೆ, ಅಣೆಕಟ್ಟೆಯ ಗೋಡೆಗೆ ಬಂದು ಅಪ್ಪಳಿಸುವ ನೀರಿನಲೆಗಳು. ಉದ್ಯಾನವಿನ್ನೂ ಇದೆ, ಆದರೆ ನೋಡಿಕೊಳ್ಳುವವರಿಲ್ಲದೆ ಬರಡಾಗಿದೆ. ಆಗ ಕೇವಲ ಸುತ್ತಮುತ್ತಲಿನವರಿಗೆ ಪಿಕ್ನಿಕ್ ತಾಣವಾಗಿದ್ದ ಮಾರ್ಕೋನಹಳ್ಳಿ ಈಗ ಕಮರ್ಷಿಯಲ್ ಆಗುತ್ತಿದೆ. ಹಳೆಯ ನೆನಪುಗಳ ಜೊತೆ, ಹೊಸ ನೋಟಗಳನ್ನು ಹೊತ್ತುಕೊಂಡು ಬಂದದ್ದಷ್ಟೇ ಸಮಾಧಾನ.
good comment nice to c
Regards
Manjunath