ಮೇಲುಕೋಟೆ ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ಇವೆರೆಡೇ – ಒಂದು ವೈರಮುಡಿ ಉತ್ಸವ, ಮತ್ತೊಂದು ‘ಪುಳಿಯೋಗರೆ’. ಎಂದಿನಂತೆ ಹೋಗುವ ಮಂಡ್ಯ-ಜಕ್ಕನಹಳ್ಳಿ ಕ್ರಾಸ್ ಕಡೆಯಿಂದ ಹೋಗುವ ಬದಲು ಮತ್ತೊಂದು ದಿಕ್ಕಿನಿಂದ ಮೇಲುಕೋಟೆಗೆ ನಮ್ಮ ಪಯಣ ಸಾಗಿತ್ತು. ಬೆಳಿಗ್ಗೆ ಬಲಮುರಿ, ಕೆ.ಅರ್.ಎಸ್. ನೋಡಿಕೊಂಡು ಚಿನಕುರಳಿ (ಪಾಂಡವಪುರ ಬಳಿ ಈ ಹೆಸರಿನ ಊರೊಂದಿದೆ) ಮೂಲಕ ಚೆಲುವನಾರಾಯಣನ ಸನ್ನಿಧಿಗೆ ಸಾಗಿದ್ದೆವು. ಪ್ರತಿ ಬಾರಿ ಭೇಟಿ ಕೊಟ್ಟಾಗಲೂ ಬಿಸಿಲು-ಸೆಕೆ-ಧಗೆಯಿಂದ ಸ್ವಾಗತಿಸುತ್ತಿದ್ದ ಮೇಲುಕೋಟೆ ಈ ಸಲ ಮಳೆಮೋಡಗಳ ಜೊತೆ ಕಾಯುತಿತ್ತು. ಆಶ್ಚರ್ಯವೆಂಬತೆ ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ರಸ್ತೆಗಳೂ ಖಾಲಿಯೋ ಖಾಲಿ. ಮಳೆಗಾಲ ಮುಗಿದು ಇನ್ನೇನು ಚಳಿರಾಯ ಬರುವ ಹಾದಿಯಲ್ಲಿದ್ದಾಗ ‘ಹೋಗಿ ಬರಲೇ’ ಎಂದು ಹೇಳಲು ಬಂದಿರುವಂತೆ ಮೋಡಗಳು ಕವಿದಿದ್ದವು. ನಾವು ಊರು ತಲುಪುವ ಹೊತ್ತಿಗೆ ಊಟದ ಸಮಯ ಮೀರಿತ್ತು. ಮೊದಲು ಹೊಟ್ಟೆಯ ಪೂಜೆ ಮುಗಿಸಿ ನಂತರ ಊರು ಸುತ್ತೋಣವೆಂದು ಪಕ್ಕದಲ್ಲೇ ಇದ್ದ ಅಯ್ಯಂಗಾರರ ಮೆಸ್ ಗೆ ನುಗ್ಗಿದೆವು.
ಹೊರಗೆ ಜಿಟಿಜಿಟಿ ಮಳೆ, ನಿರ್ಜನ ರಸ್ತೆ, ಒಂದೆರಡು ಮನೆಗಳ ಮುಂದೆ ಕುಳಿತು ಹರಟೆಯ ಗುಸುಗುಸು ನಡೆಸುತ್ತಿದ್ದ ಊರ ಜನ, ಆಧುನಿಕತೆಯ ಕುರುಹುಗಳೇ ಇಲ್ಲದಂತಿದ್ದ ಆ ಘಳಿಗೆ ಕಾಲಚಕ್ರದಲ್ಲಿ ದಶಕಗಳಷ್ಟು ಹಿಂದೆ ಕರೆದುಕೊಂಡು ಹೋಗಿ ಮಲೆನಾಡಿನ ಯಾವುದೋ ಮೂಲೆಯಲ್ಲಿನ ಹಳ್ಳಿಗೆ ಹೋದ ಹಾಗಿತ್ತು. ಮಳೆಯನ್ನೇ ನೋಡುತ್ತಾ ಮೈಮರೆತಿದ್ದ ನನ್ನನ್ನು ಘಮ್ಮೆನಿಸುವ ಪುಳಿಯೋಗರೆ ಮತ್ತೆ ವಾಸ್ತವಕ್ಕೆ ತಂದೆಳೆದಿತ್ತು. ಧಗಧಗಿಸುತ್ತಿದ್ದ ಜಠರಾಗ್ನಿಯನ್ನ ಶಮನಿಸಿ ಮೆಸ್ ನಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಮಳೆಯ ಆರ್ಭಟ ಹೆಚ್ಚಾಯಿತು. ತಕ್ಷಣ ನೆನಪಾದದ್ದು ಪಕ್ಕದಲ್ಲಿಯೇ ಇದ್ದ ಪು.ತಿ.ನ.ರವರು ಹುಟ್ಟಿದ ಮನೆ – ಜೊತೆಗಿದ್ದ ಕನ್ನಡಿಗರಲ್ಲದ ಗೆಳೆಯರಿಗೆ ನಮ್ಮ ಕವಿಮನೆ ತೋರಿಸಿ, ಕನ್ನಡದ ಸಾಹಿತ್ಯದ ಒಂದು ಕಿರು ಪರಿಚಯವನ್ನೂ ಮಾಡಿಸಿದೆ. ಮಳೆರಾಯನ ಕೋಪ ಸ್ವಲ್ಪ ಕಡಿಮೆಯಾದಂತೆಯೇ ನಮ್ಮ ಸುತ್ತಾಟ ಶುರುವಾಯಿತು.
ಮೇಲುಕೋಟೆಗೆ ಬಹಳಷ್ಟು ಸಲ ಬಂದಿದ್ದ ನಾನು ಉಳಿದಿಬ್ಬರು ಗೆಳೆಯರಿಗೆ ಅಘೋಷಿತ ಗೈಡ್ ಆಗಿಬಿಟ್ಟಿದ್ದೆ. ಮಳೆಯ ಕಣ್ಣು ಮುಚ್ಚಾಲೆಯ ನಡುವೆಯೇ ನಮ್ಮ ತಿರುಗಾಟ ನಡೆದಿತ್ತು – ಅಕ್ಕ-ತಂಗಿ ಕೊಳ, ರಾಯ ಗೋಪುರ, ಚೆಲುವರಾಯ ಸ್ವಾಮಿ, ಸಂಸ್ಕೃತ ಅಕಾಡೆಮಿ. ಕೊನೆಗೆ ಧನುಷ್ಕೋಟಿಯ ಬಳಿ ಆ ಸ್ಥಳಕ್ಕೂ ರಾಮಾಯಣಕ್ಕೂ ಇರುವ ನಂಟಿನ ಬಗ್ಗೆ ನನಗೆ ತಿಳಿದ ಅಲ್ಪ-ಸ್ವಲ್ಪ ಕಥೆ ಹೇಳುವಷ್ಟರಲ್ಲಿ ಸುತ್ತ ಒಂದು ಸಣ್ಣ ಪ್ರವಾಸಿಗರ ಗುಂಪೇ ನೆರೆದಿತ್ತು. ಇವೆಲ್ಲ ಮುಗಿಸಿ ದೊಡ್ಡ ಕಲ್ಯಾಣಿಯ ಹತ್ತಿರ ಬರುವಷ್ಟರಲ್ಲಿ ಮಳೆರಾಯನಿಗೂ ತಲೆಕೆಟ್ಟು ಧೋ ಎಂದು ಸುರಿಯತೊಡಗಿದ. ಮಳೆ ಸ್ವಲ್ಪ ಕಡಿಮೆಯಾಗಲೆಂದು ಕಲ್ಯಾಣಿಯ ಮಂಟಪದಲ್ಲಿ ಬಿಡಾರ ಹೂಡಿ ನನ್ನ ಪೌರಾಣಿಕ ಕಥಾ ಸರಣಿ ಮುಂದುವರೆಯಿತು. ಸುಮಾರು ಅರ್ಧ ಗಂಟೆ ಕಾದರೂ ಮಳೆ ನಿಲ್ಲದಿದ್ದರಿಂದ, ಕೆಳಗಿನಿಂದಲೇ ಬೆಟ್ಟದ ಮೇಲಿನ ಯೋಗಾನರಸಿಂಹನಿಗೆ ಕೈಮುಗಿದು ಒಲ್ಲದ ಮನಸಿನಿಂದ ಗಾಡಿ ಹತ್ತಿ ಮನೆಯ ಕಡೆ ಹೊರಟೆವು.