ವಿರುಪಾಪುರ, ನಮ್ಮ ಹಳ್ಳಿಯಿಂದ ಈಶಾನ್ಯಕ್ಕೆ ಸುಮಾರು ಒಂದು ಮೈಲಿ ದೂರದಲ್ಲಿರೋ ಒಂದು ಸಣ್ಣ ಹಳ್ಳಿ. ನಮ್ಮೂರೇ ಚಿಕ್ಕದು ಅಂದರೆ ವಿರುಪಾಪುರ ಮತ್ತೂ ಸಣ್ಣ ಊರು. ಹಳ್ಳಿಯ ಉತ್ತರಕ್ಕೆ, ರಸ್ತೆಯ ಮಗ್ಗುಲಿಗೇ ಒಂದು ಸಣ್ಣ ಗುಡ್ಡ. ದಾಪುಗಾಲು ಹಾಕುತ್ತಾ ಹತ್ತಿದರೆ 15-20 ನಿಮಿಷಗಳಲ್ಲೇ ತುದಿಯಲ್ಲಿರುವ ಮಂಟಪ ತಲುಪುವಷ್ಟು ಸಣ್ಣದು. ಗುಡ್ಡ ಚಿಕ್ಕದಾದರೂ ನನ್ನಲ್ಲಿ ಊರೂರು ಸುತ್ತುವ, ಬೆಟ್ಟ-ಗುಡ್ಡಗಳಲ್ಲಿ ಅಲೆಯುವ ಗೀಳು ಹುಟ್ಟುಸಿದ ಜಾಗ. ಚಿಕ್ಕವನಿದ್ದಾಗ ಬೇರೆಯವರು ಹೇಳಿದ ಸೀಳುನಾಯಿಗಳ ಕಥೆಯನ್ನು ಕಣ್ಣಾರಳಿಸಿ ಕೇಳಿ, ಮೂರ್ನಾಲ್ಕು ವರ್ಷಗಳ ನಂತರ ಅದೇ ಬೆಟ್ಟದಲ್ಲಿ ಕಲ್ಲು-ಬಂಡೆಗಳ ಸಂದಿಯಲ್ಲಿ, ಪೊದೆಗಳ ಹಿಂಬದಿಯಲ್ಲಿ ಹುಡುಕಿದ್ದೂ ಉಂಟು. ಸೀಳುನಾಯಿಗಳ ಜೊತೆಗೆ, ಬೆಟ್ಟದ ಮೇಲೆ ಬೆಳೆದಿದ್ದ ಲೆಕ್ಕವಿಲ್ಲದಷ್ಟು ಸೀತಾಫಲ ಗಿಡಗಳಲ್ಲಿ ಹಣ್ಣುಗಳನ್ನು ಹುಡುಕಿದೆಷ್ಟೋ. ಬೇಸಿಗೆ ರಜೆಗಳಲ್ಲಿ ಬೆಟ್ಟ ಹತ್ತಿಳಿದ, ಒಂಟಿ ಹಾಳು ಮಂಟಪದಲ್ಲಿ ಒಬ್ಬನೇ ಕುಳಿತು ಕಳೆದ ಸಮಯವೆಷ್ಟೋ.
ವಿರುಪಾಪುರ ಗುಡ್ಡದ ದಕ್ಷಿಣದ ಎತ್ತರದಲ್ಲಿ ಒಂಟಿ ಹಾಳು ಮಂಟಪವಿದ್ದರೆ, ಉತ್ತರ ತುದಿಯಲ್ಲಿ ಸ್ವಲ್ಪ ತಗ್ಗಿನಲ್ಲಿ ರಾಮ ಕಟ್ಟಿಸಿದನೆಂದು ಹೇಳುವ ಶಿವನ (ಸಿದ್ದರಾಮೇಶ್ವರ) ಗುಡಿಯಿದೆ. ರಾಮಾಯಣ ಕಾಲದಲ್ಲಿ, ರಾಮ-ಲಕ್ಷ್ಮಣ-ಹನುಮಂತರು ಸೀತೆಯನ್ನು ಹುಡುಕುತ್ತಾ ಬಂದಾಗ ಈ ಗುಡಿಯನ್ನು ಕಟ್ಟಲಾಯಿತೆಂದು ಪ್ರತೀತಿ. ಸೀತೆಯನ್ನು ಹುಡುಕುತ್ತ ಹನುಮಂತ ಒಂದೇ ನೆಗೆತಕ್ಕೆ ಈ ಗುಡ್ಡದಿಂದ ಶಿವಗಂಗೆ ಗುಡ್ಡಕ್ಕೆ ಹಾರಿದನೆಂದು ಕೂಡ ಕೇಳಿದ್ದೇನೆ. ಗುಡಿಯಿಂದಾಗಿ ಊರಿಗೆ ‘ವಿರೂಪಾಕ್ಷಪುರ’ ಎಂದು ಹೆಸರು ಬಂತೆಂದೂ, ನಂತರ ಜನರ ಬಾಯಲ್ಲಿ ‘ವಿರುಪಾಪುರ’ ಆಯಿತೆಂದು ಒಂದು ಕಥೆ.
ಈಗಲೂ ಹಳ್ಳಿಗೆ ಹೋದಾಗ ವಿರುಪಾಪುರದ ಗುಡ್ಡ, ಒಂಟಿ ಮಂಟಪದ ಕಡೆ ಮನಸ್ಸೋಡುತ್ತದೆ. ಈಗಂತೂ ಕಲ್ಲು-ಗಣಿಗಾರಿಕೆಯಿಂದಾಗಿ ಗುಡ್ಡದ ಕಾಲು ಭಾಗ ಆಗಲೇ ಮರೆಯಾಗಿದೆ. ನನ್ನ ಸುತ್ತಾಟಗಳಿಗೆ ಇಂಬು ಕೊಟ್ಟ ವಿರುಪಾಪುರದ ಗುಡ್ಡ, ಹಾಳು ಮಂಟಪ – ಕಣ್ಮುಂದೆಯೇ ಇಲ್ಲದಂತಾಗುವಾಗ, ಸ್ವಂತದ್ದೇನೋ ಕಳೆದುಕೊಳ್ಳುತಿದ್ದೇನೆಯೋ ಅನ್ನಿಸುತ್ತಿದೆ. ಕಲ್ಲು ಕರಗುವ ಮುನ್ನ, ನೋಡಬೇಕೆಂದಿದ್ದರೆ ಹೇಳಿ – ಗುಡ್ಡ ಹತ್ತಿಸಿ, ಸೀಳು ನಾಯಿಯ ಗುಹೆ ತೋರಿಸಿ ಬರುತ್ತೇನೆ 🙂
ಅಚ್ಹ ಕನ್ನಡದ ಊರಿನ ಬಗ್ಗೆ ಅಚ್ಚ ಕನ್ನಡದಲ್ಲಿ ಹೇಳುವ ಪ್ರಯತ್ನ ಬಹಳ ಚೆನ್ನಾಗಿದೆ. ವಿರುಪಾಪುರದ ಗುಡ್ಡದ ಮುಂದೆಯೆ ಹಾದು ಹೋದರೂ ಆ ದಿನ ಅದನ್ನು ಹತ್ತಲು ನೀನು ಬಿಡಲಿಲ್ಲ… ಮತ್ತೊಮ್ಮೆ ಹೋದಾಗ ಸೀಳುನಾಯಿ ಗುಹೆಯನ್ನ ತೋರಿಸುವುದನ್ನು ಮರೆಯಬೇಡ.
ನಿನ್ನ ಈ ಪ್ರಯತ್ನ ಯಶಸ್ವಿಯಗಲೆಂದು ಹಾರೈಸುತ್ತಾ – ಶ್ರಿಕ್ (ಸಹ ಪಯಣಿಗ!!)
ಧನ್ಯವಾದಗಳು, ಶ್ರಿಕ್… 🙂